Showing posts with label Kannada poem. Show all posts
Showing posts with label Kannada poem. Show all posts

Thursday, February 1, 2018

ಚಂದ್ರಗ್ರಹಣ


ಚಂದ್ರಗ್ರಹಣ
ಹೋಗಿದ್ದೆ ನಾನೂ
ನೋಡಲು ಚಂದ್ರಗ್ರಹಣ
ಆನಂದಿಸಿದೆ ಅದು
ಬಿಡುವ ಪ್ರತಿ ಕ್ಷಣ
ನಾ  ಬಿಟ್ಟು ಹೋದ ಕಾರಣ
ಇನ್ನೂ ಬಿಟ್ಟಿಲ್ಲ ನನ್ನವಳ
ಮುಖದ ಮೇಲಿನ ಗ್ರಹಣ

Tuesday, November 21, 2017

ಮುತ್ತು



ಗೆಳತಿ,
ಏಷ್ಟು ದಿನಗಳಾದವೇ
ನಾವು ಮುತ್ತು ಕೊಟ್ಟು;
ಬೇಗ ಬಾ ಮನೆಗೆ
ಕೂಡಿ ಹೋಗೋಣ
ಅಕ್ಕಸಾಲಿಗನ ಕಡೆಗೆ;
ಮಾಡಿರಬಹುದು ಅವನು
ನಾವು ಕೊಟ್ಟ ಮುತ್ತುಗಳ ಹಾರ.

Friday, January 30, 2015

ನೀನು ಮತ್ತು ದಾರಿ

ಕ್ರಮಿಸುವ ಹಾದಿ, ನೀನು 
ಯಾವತ್ತೂ ಅಸ್ಪಷ್ಟ,

ಮುಂದುವರೆದ ಹಾಗೆಲ್ಲ 
ತಿರುವುಗಳನೇಕ, ನಿಗೂಢ. 

ಯಾವ ತಿರುವಿನ ತುದಿ ಯಾವ ಗಮ್ಯಕೋ,
ನಿನ್ನ ಪ್ರೀತಿಯ ತೊರೆ ಯಾವ ತೀರಕೋ.  


















ದಾರಿಗೋ ಸಾಸಿರ ಸಂಗಾತಿ,
ನನಗೇ  ನಿನಷ್ಟೇ ಜೊತೆಗಾತಿ, 

ಬಿಡುವದಾದರೆ 
ಹೇಳಿ ಬಿಡು ಮುನ್ನ,

ಹಿಡಿಯುವೆ ನಾನೂ 
ಮರಳಿ ಬಾರದ ದಾರಿಯನ್ನ 

Sunday, December 14, 2014

ಅಂತ್ಯ


ಹೆಪ್ಪುಗಟ್ಟಿದ ನನ್ನ 

ಹಿಮಸದೃಶ ಹೃದಯದಲ್ಲಿ 

ಪ್ರೀತಿಯ ಸೆಲೆ

ಉಕ್ಕಿಸಿದವನು ನೀನು,


ನಿನ್ನ ಮನಸ ಆಣೆಕಟ್ಟೆಯಲಿ 


ನದಿಯಾಗಿ ಭೋರ್ಗರೆವ 

ಹಂಬಲವಿಟ್ಟೆ ನಾನು ,


ಎಂಥ ವಿಪರ್ಯಾಸ !


ನಾನೀಗ -

ಸಾಗರದ ನಡುವಿನ


ಏರಿಳಿತವಿಲ್ಲದ ಶಾಂತ ಅಲೆ.







Friday, October 17, 2014

ಸ್ವರ್ಗ!!!!



ರಾಮಾಚಾರಿ ಸತ್ತು 
ಜನ್ನತ್ತಿಗೆ ಹೋದನಂತೆ 
ಅವನ ಮನೆ ಇದ್ದದ್ದು 
ಮಸ್ಜಿದ್ದಿಗೆ ಹತ್ತಿರವಂತೆ 

Wednesday, October 15, 2014

ಕೊಲೆ


ಅಳಬೇಡ ದಯವಿಟ್ಟು,
ನಿನ್ನ ಕಣ್ಣಿನ ಪ್ರತಿ ಹನಿ 
ನನ್ನ ಜೀವನದ ಒಂದೊಂದು
ಕ್ಷಣವನು ಕಡಿಮೆ ಮಾಡತ್ತೆ,

 ನಿನ್ನ ನಗು ನನ್ನ ಉಸಿರು
ಅಂತೆಲ್ಲ ಹೇಳಿದ
     ನನ್ನ ಪ್ರೀತಿಯ ಹುಡುಗ.....

ಈಗ ನನ್ನ ನಗುವನ್ನೇ 
ಸಾಯಿಸಿಬಿಟ್ಟನಲ್ಲ!!

ಆಸೆ


ಅವನನ್ನು ನೋಡಿದಾಗಲಿಂದ,
ಇಷ್ಟು ವರ್ಷಗಳಲ್ಲಿ ಒಮ್ಮೆಯೂ 
ಬರದ ಯೋಚನೆ ಕಾಡುತಿದೆ;
ಮನದಲ್ಲಿ ಒಮ್ಮೆಯೂ
ಮೂಡದ ಆಸೆ ಮೂಡುತಿದೆ;
  ನನಗೂ ಹೀಗೆ ಒಬ್ಬ ಮಗನಿರಬೇಕಿತ್ತು 

Sunday, February 16, 2014

ಅವನು

ಅವನು 





ಹನಿಗವನವಾಗಿ ಬಂದು, 
ಕವಿತೆಯಾಗಿ ಮನ ಸೇರಿದ. 
ಧಾರಾವಾಹಿಯಾಗಿ ಕಾಡಿಸಿ,
ನೀಳ್ಗತೆಯಾಗಿ ಆವರಿಸಿದ. 
ಕಾದಂಬರಿಯಾಗಿ ಜೊತೆಗೂಡಿ, 
ಆತ್ಮ ಚರಿತ್ರೆಯಾಗಿ ಹೋದ. 

Tuesday, February 11, 2014

ಕನ(ನ)ಸು


ಕನ(ನ)ಸು 


ನಿನ್ನ ಕನಸುಗಳನ್ನು ಜೀವಿಸಿ,

ಆಶಿಸಿ, ಹಾತೊರೆದೆ 

ಅವು ನನಸಾಗಲೆಂದು;

ಗೊತ್ತಿರಲಿಲ್ಲ,




ನೀನು ಕನಸುಗಳಲ್ಲೇ 

ಮಾತ್ರ ಜೀವಿಸುವವ,

ಹೊರ ಲೋಕದ

ಅರಿವು ನಿನಗಿಲ್ಲವೆಂದು.

Tuesday, January 7, 2014

ಕ್ಷಣ ಕ್ಷಣ


ನೀನೊಲಿದ ಆ ಕ್ಷಣದಿಂದ; 

ನೀ ಜೊತೆಗಿರುವ ಈ ಕ್ಷಣದವರೆಗೂ; 

ಮುಂದೆ ನೀನಿಲ್ಲದ ಆ ಕ್ಷಣದಲ್ಲೂ; 

ನಿನ್ನ ಹೆಸರೇ ನನ್ನುಸಿರು ಪ್ರತಿ ಕ್ಷಣದಲೂ. 



Sunday, January 5, 2014

ಮಹಲ್



ಇದು ಪ್ರೀತಿ
~~~~ ~~~
ನಾ ಸತ್ತ ಮೇಲೆ ಬೇಡ
ನನಗೊಂದು ತಾಜ್ ಮಹಲ್;
ನಾನು ಮುಮ್ತಾಜ್ ಆಗಲೊಲ್ಲೇ, 
ನಿನ್ನ ಮನಸಿನ ಏಕೈಕ
ಪ್ರೀತಿ ನಾನಾದರೆ ಸಾಕು. 

ಇದು ಜೀವನ
~~~ ~~~~
ನಾ ಸತ್ತ ಮೇಲೆ ಬೇಡ
ನನಗೊಂದು ತಾಜ್ ಮಹಲ್
ನೀ ಸಾಯುವ ಮೊದಲು ಕಟ್ಟಿಸು
  ನನಗೆಂದು ಮೂರಂತಸ್ತಿನ ಮಹಲ್ 

ಚಿತ್ರಕೃಪೆ : ಅಂತರ್ಜಾಲ


Thursday, January 2, 2014

ಹೊಸ~ಹಳೆ


ಹೊಸ~ಹಳೆ
********

ಬೆಸೆದಂತೆ ಹೊಸ
ಸಂಬಂಧಗಳು
ಕಳಚದಿರಲಿ
ಹಳೆ ಕೊಂಡಿಗಳು

ಮೂಡಿದಂತೆ ಹೊಸ
ಆಸೆಗಳು
ಬಾಡದಿರಲಿ
ಹಳೆ ಕನಸುಗಳು

ಬಂದಂತೆ ಹೊಸ
ವರುಷಗಳು
ಮರೆಯದಿರಲಿ
ಹಳೆ ಹರುಷಗಳು



Tuesday, December 3, 2013

ಸೋಲು


ಕತ್ತಲವ ನುಂಗಿದ 
ಬೆಳಕಿನ ಅಹಂಕಾರ 
ಸೋತಿತು  ಮತ್ತೆ
ಇರುಳು ಆವರಿಸಿದಾಗ

day and night by adypetrisor

  ಸೊಕ್ಕಿನಿಂದ 
 ಮೆರೆಯುತ್ತಿದ್ದ ಇರುಳಿಗೆ 
ಸಾಕಾಯಿತು ಬೆಳಕಿನ 
ಒಂದೇ ಕಿರಣ



ಛಾಯಾ ಚಿತ್ರ ಕೃಪೆ : ಅಂತರ್ಜಾಲ 
 

Monday, December 2, 2013

ಕನ್ನಡವ್ವನ ಸೀರೆ

ಕನ್ನಡವ್ವನ ಸೀರೆ

ನನ್ನ ಕನ್ನಡವ್ವನ ಸೀರೆ ಹರಿದು ಹೋಗಿದೆ 
ನಾವೆಲ್ಲ ವಲಸೆ ಹೋಗಿ; 
ಇದ್ದಲ್ಲೇ ಅವಳ ಮರೆತು, 
ಅನ್ಯ ಭಾಷೆಯ ತೇಪೆ ಹಚ್ಚಿ ಹೊಲಿದರೆ 
ಚೆಂದ ಕಾಣಿಸ್ತಾಳಾ ನಮ್ಮವ್ವ ?

ಅವಳಿಗೆ ಬೇಕು ಹೊಸ ಸೀರೆ ತನ್ನದೇ 
ನೋಯಿಸಬೇಕೆ ಅವಳನ್ನ?
ಕೊಡಲಾಗದೇ ಅಷ್ಟು ಕೂಡ 
ಕನ್ನಡದ ಮಕ್ಕಳು ನಾವು; 
ಅವಳ ಋಣ ನಮಗೆ ತೀರಿಸಲಾಗದೇ?

ಮುಗಿಯಿತು ನವೆಂಬರ್ 
ಕಾಯಬೇಕಾ ಅವಳು 
ಮತ್ತೆ ಒಂದು ವರುಷ?
ಬಳಿಸಿ ಕನ್ನಡ ಪ್ರತಿಕ್ಷಣ;
ಸಿಂಗರಿಸಿ ಅವಳನ್ನ 
ನಾವು ಪಡಬಾರದೇ ಹರುಷ?

Sunday, December 1, 2013

ಕಾಲ ದೀಪ


ಕಾಲ ದೀಪ 

ಸೂರ್ಯನ ಹಿಂದೆ ದೀಪ ಹಚ್ಚಿ
ಹಬ್ಬ ಮಾಡುವದನ್ನು ನೋಡಿ
ಆ ಚಂದಿರ ನಕ್ಕನಂತೆ
ದೀಪ ಹಚ್ಚಲು ಕತ್ತಲೆಗೆ ಕಾಯಬೇಕೇ?
ಬಾಳ  ಬೆಳಗಲು ಸಮಯ ನೋಡಬೇಕೇ?
ಹಚ್ಚಿದ ದೀಪ ಆರದೇ ?
ಸಮಯ ಸರಿದರೆ ಬರುವದೇ?



Wednesday, October 30, 2013

ಕಳೆದು ಹೋಗಿದೆ

ಕಳೆದು ಹೋಗಿದೆ
************
ಕಳೆದು ಹೋಗಿದೆ
ಹುಡುಕಿ ಕೊಡಿ
ಬಹಳ ಬೆಲೆಯುಳ್ಳದ್ದು
ಸಿಕ್ಕರೆ  ದಯವಿಟ್ಟು ತಿಳಿಸಿಬಿಡಿ
ಅವರು ಮಾತಾಡೋದು ಎನ್ನಡ ಎಕ್ಕಡ
ಇವರು ಮಾತಾಡೋದು ಕಹಾನ್ ಕಿಧರ್
ಎಲ್ಲರೂ ಕೇಳೋದು ಹೂ ಆರ್ ಯು ಡಿಯರ್
ಕೊನೆಗೆ ಯಾರೋ ಹೇಳಿದರು
ನಾಳೆ ನವೆಂಬರ್ ೧
ನಾಳೆ ಮಾತ್ರ ಸಿಗತ್ತೆ
ನಾಳೆ ಮಾತ್ರ ಕೇಳಿಸೊತ್ತೆ
ಬೇಗ ಹೋಗಿ ಹಿಡ್ಕೊಳ್ಳಿ
ಇಲ್ಲ ಪೂರ್ತಿ ವರ್ಷ ಹುಡ್ಕೊಳ್ಳಿ

Tuesday, October 15, 2013

ಮರು-ಭೂಮಿ-ಸಮುದ್ರ

 
ಮರು-ಭೂಮಿ-ಸಮುದ್ರ
****************
 
 
ಅಳುವ ಮನದ ಕಣ್ಣಿರು
ಹೊರ ಬರುವ ಹಾಗಿದ್ದರೆ 
ಜಗತ್ತಿನಲ್ಲಿರುವ
ಈ ಭೂಮಿಯೂ ಸಹ ಸಮುದ್ರವಾಗುತ್ತಿತ್ತು
ಬೇಡ
ಅದು ಭೂಮಿಯಾಗಿಯೇ ಉಳಿಯಲಿ
ಕಣ್ಣಿರು ಮನದಲೇ ಬತ್ತಿ ಮನಸು
ಮರುಭೂಮಿಯಾಗಲಿ


Wednesday, September 25, 2013

__ ದೀಪ

 ಈ ಹನಿಗವನ ಒಂಥರಾ ಹಳೆ ವೈನ್, ಹೊಸ ಬಾಟಲಿ ಇದ್ದ ಹಾಗೆ, ಬಹಳ ಜನ ಈ ದೀಪದ ಮೇಲೆ ಇವೇ ಶಬ್ದಗಳನ್ನ ಉಪಯೋಗಿಸಿ ಬರೆದಿದ್ದಾರೆ, ನಾನು ಕೂಡ ಶಬ್ದಗಳನ್ನ ಆಚೀಚೆ ಮಾಡಿ ಬರೆಯುವ ಪ್ರಯತ್ನವನ್ನು ಮಾಡಿದ್ದೇನೆ.

ದೀಪ

ದೀಪ ಉರಿಯುವದಲ್ಲ 
      ವಿಶೇಷ
ಅದು ಪ್ರಕೃತಿ ನಿಯಮ  
ಉರಿಯುವದು
           ಅದರ ಕರ್ಮ
ತಿಳಿಯಿರಿ ಉರಿವ
           ಹಿಂದಿನ ಮರ್ಮ
ದೇವರ ಮುಂದೆ
           ನಂದಾ  ದೀಪ
ಸತ್ತ ಮನೆಯಲ್ಲಿ
          ಸೂತಕದ ದೀಪ
ಕತ್ತಲಲ್ಲಿರುವರಿಗೆ ಬೆಳಕು ನೀಡಿ
           ದಾರಿ ದೀಪ
ಹಾರುವ ಗಾಳಿಗೆ ಜೊತೆಗೂಡಿ
            ಬೆಂಕಿದೀಪ
ಈಗ ಹೇಳಿ
           ನೀವಾವ ದೀಪ?

Thursday, September 19, 2013

ಕೋರಿಕೆ

ಕೋರಿಕೆ

******** 

ನನ್ನ ಪ್ರೀತಿಯ ಹುಡುಗಾ ತಗೆದುಕೋ
ಆ ಸಾಗರದಡಿಯ ಮುತ್ತುಗಳಿಗಿಂತ 

ಜಾಸ್ತಿ ಸಿಹಿ ಮುತ್ತುಗಳನ
ಎಣಿಸಲಸಾಧ್ಯವಾದ ತೆರೆಗಳಿಗಿಂತ  
ಜಾಸ್ತಿ ಅಪ್ಪುಗೆಗಳನ
ಆಕಾಶದೊಳಗಿನ ತಾರೆಗಳಿಗಿಂತ 
ಜಾಸ್ತಿ ನನ್ನ ಮುಗುಳ್ನಗೆಗಳನ
ಆದರೆ ಕೊಡುವದಿಲ್ಲ  ಮಾತ್ರ
ಸಾಗರದಾಳದ ನನ್ನ ಮನಸಿನ ನೋವನ್ನ
ತೆರೆಗಳಿಗಿಂತ ಜೋರಾಗಿ ಬರುವ ಅಳುವನ್ನ
ತಾರೆಗಳ ಹಿಂದಿನ ಕತ್ತಲಿನಷ್ಟಿರುವ ದುಃಖವನ್ನ

Sunday, August 25, 2013

ಈರುಳ್ಳಿ ಹಾಗು (ಮೊಸಳೆ) ಕಣ್ಣೀರು

ಈರುಳ್ಳಿ ಹಾಗು (ಮೊಸಳೆ) ಕಣ್ಣೀರು
***********************

ಈರುಳ್ಳಿ ಬೆಲೆ ಎರಿತು  ಗಗನಕ್ಕೆ
ಅಳು ಏರಿತು ತಾರಕಕ್ಕೆ
ಅತ್ತದ್ದು ಎಷ್ಟು ದಿನ?
ತಿನ್ನೋದು ಬಿಟ್ಟಿದ್ದು ಎಷ್ಟು ಜನ
Crying Onion Royalty Free Stock Images - Image: 14806619


ಅಳು ಕೇಳಿದ ಸರಕಾರ
ಹಾಕಿದ್ದು ಬರೀ  (ಮೊಸಳೆ)ಕಣ್ಣೀರು
ಗೊತ್ತಾದರೂ ಏನು ಮಾಡುವರು
ಶ್ರೀಸಾಮಾನ್ಯರು ಇವರು

ಇದೆಲ್ಲಾ ಆಗಿದೆ ಅವರಿಗೆ ರೂಢಿ
ದುಷ್ಟ ಬುದ್ಧಿಯೆಲ್ಲಾ ಕೂಡಿ
ಮಾಡಿದ್ದಾರೆ  ಇವರಿಗೆ ಮೋಡಿ
ಎಷ್ಟು ದಿನ ಈ (ಮೊಸಳೆ)ಕಣ್ಣೀರು ಕಾದು ನೋಡಿ
ಚಿತ್ರ ಕೃಪೆ ಇಲ್ಲಿ