ಯಾವಾಗ
ನಿನ್ನ ಜೀವವಾಗಿದ್ದೆ,ನಿನ್ನ ಜೀವನವಾಗಿದ್ದೆ.
ಯಾವಾಗ
ನಿನ್ನ ಬಾಳ ಜ್ಯೋತಿ ಆರಿಸುವ ಬಿರುಗಾಳಿಯಾದೆ ನಾನು?
ನಿನ್ನ ಹೃದಯದ ಪ್ರತಿ ಬಡಿತದ ಹೆಸರಾಗಿದ್ದೆ.
ಯಾವಾಗ
ನಿನ್ನ ಉಸಿರು ಕಟ್ಟೋ ಕೆಸರಾದೆ ನಾನು?
ನಿನ್ನ ಬಾಳಿನ ಒಂದೇ ಗುರಿಯಾಗಿದ್ದೆ.
ಯಾವಾಗ
ನಿನ್ನನ್ನೇ ಕೊಲ್ಲುವ ಹೆಮ್ಮಾರಿಯಾದೆ ನಾನು?
ಕೋಟಿ ಜನುಮದ ಸಂಗಾತಿಯಾಗುವ
ಕನಸು ಕಟ್ಟಿದ್ದೆ ನೀನು
ಕೋಟಿ ಜನುಮವಲ್ಲ,ಒಂದು ಕ್ಷಣವೂ
ಜೊತೆಯಾಗಲಿಲ್ಲ ನಾವು.
ಕೊನೆಯಾಗಲಿ ಈ ರಾತ್ರಿ ನನಗೆ
ಆ ಸೂರ್ಯ ನೋಡಿ ನಗಲಿ ನಾಳೆಗೆ
ಕೊನೆಯಾಗಲಿರುವ ಆ ನಾಳೆಗೆ ಕಾದು ಕುಳಿತಿರುವೆ.
ಮರಣಕ್ಕೆ ಮಹೂರ್ತ ಬಂದಿದೆ ಅಲ್ಲವೇ
ಮರಣವೇ ಮಹಾನವಮಿಯಾಗಲಿ ನನಗೆ
ಮರು ಜನ್ಮವಿದ್ದರೆ ನಮಗೆ,
ಮತ್ತೇ ಕೂಡೋಣ,ಕಾದಾಡೋಣ,
ಕಾಯುವೆಯಾ ಅಲ್ಲಿಯವರೆಗೂ?
ಇರುವೆಯಾ ಕೊನೆಯವರೆಗೂ?