Tuesday, August 17, 2010

ಕಾಗಕ್ಕಾ ಮತ್ತ ಗುಬ್ಬಕ್ಕನ ಕಥಿ

ಎಲ್ಲರಿಗೂ ನಮಸ್ಕಾರ,
ಈ ಕಥೆ ನಾನು ಚಿಕ್ಕವಳಿದ್ದಾಗ ಕೇಳ್ತಾ ಇದ್ದೆ. ನೀವು ಕೂಡ ಇದನ್ನ ಕೇಳಿರಬಹುದು. ಈಗ ನನ್ನ ಚಿಕ್ಕ ಮಗಳು ತುಂಬಾ ಖುಷಿಯಿಂದ ಕೇಳುತ್ತಾಳೆ. ಈ ಕಥೆಯನ್ನು ನಮ್ಮ ಧಾರವಾಡ ಹುಬ್ಬಳ್ಳಿ ಭಾಷೆಯಲ್ಲಿ ಬರೆದಿದ್ದೇನೆ. ಓದಿ ನೀವು ಖುಷಿ ಪಡಿ. 

"ಒಂದೂರಾಗ ಕಾಗಕ್ಕಾ ಮತ್ತ ಗುಬ್ಬಕ್ಕ ಇದ್ದುವಂತ. ಕಾಗಕ್ಕನ ಮನಿ ಮಣ್ಣಿಂದ ಇತ್ತಂತ. ಗುಬ್ಬಕ್ಕನ ಮನಿ ಕಲ್ಲಿಂದ ಇತ್ತಂತ. ಒಂದಿನಾ ಜೋರ ಮಳಿ ಬಂತಂತ. ಕಾಗಕ್ಕನ ಮನಿಯೆಲ್ಲ ನಿರೋಳಗ ಹರದ ಹೋತಂತ. ಏನ ಮಾಡಲಿ ಅಂತ ಭಾಳ ವಿಚಾರ ಮಾಡಿ ಗುಬ್ಬಕ್ಕನ ಮನಿಗೆ ಹೋಗಿ, ಟಕ್,  ಟಕ್ ಅಂತ ಬಾಗಿಲಾ ಬಾರಸ್ತಂತ. ಗುಬ್ಬಕ್ಕ ಒಳಗಿಂದ "ಯಾರದು" ಅಂತ ಕೇಳಿದ್ದಕ್ಕ, "ನಾನು ಕಾಗಕ್ಕಾ, ಮಳಿ ಬಂದು ನನ್ನ ಮನಿ ಎಲ್ಲಾ ಹರದ ಹೋಗ್ಯದ. ಇವತ್ತ ಒಂದ ದಿವಸ ನನಗ ನಿನ್ನ ಮನಿ ಒಳಗ ಇರಲ್ಲಿಕ್ಕೆ ಜಾಗಾ ಕೊಡು " ಅಂತ ಕಾಗಕ್ಕಾ ಹೇಳ್ತು. 


ಗುಬ್ಬಕ್ಕ " ಇನ್ನು ಐದು ನಿಮಿಷ ಬಿಟ್ಟ ಬಾ, ನನ್ನ ಗಂಡ ಊಟ ಮಾಡಕತ್ತಾನ" ಅಂತು.
ಐದು ನಿಮಿಷ ಬಿಟ್ಟ, ಕಾಗಕ್ಕ ಮತ್ತ ಟಕ್,  ಟಕ್ ಅಂತ ಬಾಗಿಲಾ ಬಾರಿಸ್ತ. ಗುಬ್ಬಕ್ಕ ಯಾರು ಅಂದರ, ಕಾಗಕ್ಕಾ ನಾನು ಅಂತಂತ. ಅದಕ್ಕ ಗುಬ್ಬಕ್ಕ " ಇನ್ನು ಐದು ನಿಮಿಷ ಬಿಟ್ಟ ಬಾ, ನನ್ನ ಮಕ್ಕಳು ಊಟ ಮಾಡಾಕತಾವ" ಅಂತು.
ಐದು ನಿಮಿಷ ಬಿಟ್ಟ, ಕಾಗಕ್ಕಾ ಮತ್ತ ಬಾಗಲಾ ಬಾರಿಸಿದ್ ಕೂಡಲೇ, ಗುಬ್ಬಕ್ಕ ಬಾಗಿಲಾ ತಗದ ಕಾಗಕ್ಕನ್ನ ಒಳಗ ಕರಿತು.
"ನೀ ಎಲ್ಲೇ ಮಕ್ಕೊತ್ತಿ? ಅಕ್ಕಿ ಚೀಲ, ಗೋಧಿ ಚೀಲ ಇಲ್ಲ ಕಡ್ಲಿ ಚೀಲ" ಅಂತ ಗುಬ್ಬಕ್ಕ ಹೇಳಿದ್ದಕ್ಕ, ಕಾಗಕ್ಕ ಕಡ್ಲಿ ಚೀಲಾನ್ನ ಆರಿಸ್ಕೊಂತು. 
ಸ್ವಲ್ಪ ಹೊತ್ತ ಆದ ಮ್ಯಾಲೆ,ಕಟುಂ ಕುಟುಂ ಅಂತ ಸಪ್ಪಳಾ ಬರಾಕತ್ತು. ಗುಬ್ಬಕ್ಕ, ಏನದು ಸಪ್ಪಳಾ ಅಂದ ಕೂಡ್ಲೆ, ಕಾಗಕ್ಕಾ " ನನಗ ಹಸಿವಿ ಬಾಳ ಆಗೆತಿ. ಅದಕ್ಕ, ಕಡ್ಲಿ ತಿನ್ಹಾಕತ್ತೆನಿ" ಅಂತು, ಗುಬ್ಬಕ್ಕ, ಅದಕ್ಕ ಸಪ್ಪಳಾ ಮಾಡಲಾರದ ತಿನ್ನು ಅಂತು.
ಕಾಗಕ್ಕ, ಸುಮ್ಮನ ತಿಂದು ಮಕ್ಕೊತು. ಮುಂಜಾನೆ ಎದ್ದು, ಗುಬ್ಬಕ್ಕಾಗ ಥ್ಯಾಂಕ್ಸ್ ಹೇಳಿ, ಹೊಸ ಮನಿ ಕಟ್ಟಾಕ ಹಾರಿ ಹೊತಂತ. "

-- 
Keep smiling,
Nivedita