Friday, October 18, 2013

ದೃಷ್ಟಿ (ದೋಷ)

ದೃಷ್ಟಿ (ದೋಷ)

ದುಬೈನಿಂದ ಮುಂಬೈಗೆ ಪಯಣಿಸಲು ದುಬೈ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಕ್ಲಿಯರ್ ಮಾಡಿಕೊಂಡು ಒಳಗೆ ಬಂದೆ. ವಿಮಾನ ಯಾನ ನಿಜವಾಗಿ  ತಲೆನೊವು. ವರ್ಷದಲ್ಲಿ ಒಂದು ಇಲ್ಲ ಎರಡು ಸಾರಿ ಭಾರತಕ್ಕೆ ಬಂದು ಹೋಗುತ್ತಿದ್ದೆ. ಪ್ರತಿ ಸಾರಿ,ಮೂರು ಗಂಟೆ ಮೊದಲೇ ವಿಮಾನ ನಿಲ್ದಾಣಕ್ಕೆ ಹೋಗುವುದು. ಬೋರ್ಡಿಂಗ್ ಪಾಸು ಸಿಗೋವರೆಗೂ ಟೆನ್ಶನ್. ಸಿಕ್ಕ ಮೇಲೆ ಇಮಿಗ್ರೇಷನ್ ಕ್ಲಿಯರ್ ಅಗೋವರೆಗೂ ಟೆನ್ಶನ್. ಆಮೇಲೆ ವಿಮಾನ ಬರೋವರೆಗೂ ೨ ಗಂಟೆ ಕಾಯುವ  ತಲೆನೋವು. ಮತ್ತೆ ವಿಮಾನದಲ್ಲಿ ೩ ಗಂಟೆ. ಮೊದಲೆಲ್ಲ ಒಬ್ಬಳೇ ಪ್ರಯಾಣ ಮಾಡುವುದು ಖುಷಿ ತರುತ್ತಿತ್ತು. ಒಂದು ಪುಸ್ತಕ ಹಿಡಿದು ಕುಳಿತರೆ ಅವರು ನನ್ನ ಹೆಸರನ್ನು ಘೋಷಣೆ ಮಾಡೋವರೆಗೂ ಓದ್ತಾನೆ ಇರ್ತಿದ್ದೆ. ಆದರೆ ದೊಡ್ಡವಳು ಹುಟ್ಟಿದ ಮೇಲೆ ಅವಳನ್ನು ಕರೆದುಕೊಂಡು ಒಬ್ಬಳೇ ಪ್ರಯಾಣ ಮಾಡುವದು ತುಂಬಾ ಶ್ರಮ ಅನಿಸುತ್ತಿತ್ತು. ಇದು ಎರಡನೆಯ ಬಾರಿ ಅವಳ ಜೊತೆ ಒಬ್ಬಳೇ ಪ್ರಯಾಣ, ಅವಳಿಗೆ ಮೈಯಲ್ಲಿ ಹುಷಾರಿರಲಿಲ್ಲ. ನನಗೂ ಕೆಲಸದಿಂದ ವಿಶ್ರಾಂತಿ ಬೇಕಾಗಿತ್ತು. ಹೀಗಾಗಿ ಒಮ್ಮೆಲೇ ನಿರ್ಧಾರ ಮಾಡಿ ಇವರಿಗೆ ಟಿಕೆಟ್ ವ್ಯವಸ್ಥೆ ಮಾಡಲು ಹೇಳಿ ಹೊರಟು ನಿಂತಿದ್ದೆ. ಆಫೀಸಿನಲ್ಲಿ ಕೂಡ ಏನೂ ಅನ್ನದೇ ರಜೆ ಕೊಟ್ಟರು.
ಎಮಿರೇಟ್ಸ್ ಏರ್ ವೇಸ್, ತುಂಬಾ ಒಳ್ಳೆಯ ಸೇವೆಯುಳ್ಳ ಏರ್ ವೇಸ್. ನನಗೆ ಅದರಲ್ಲಿ ಪ್ರಯಾಣ ಮಾಡುವದು ತುಂಬಾ ಖುಷಿ. ವಿಮಾನ ಬಂದದ್ದನ್ನ ಪ್ರಕಟಣೆ  ಮಾಡಿದರು. ಅವಳನ್ನು ಒಂದು ಕೈಯಲ್ಲಿ, ಬ್ಯಾಗನ್ನು  ಇನ್ನೊಂದು ಕೈಯಲ್ಲಿ ಹಿಡಿದು ಗೇಟ್ ೪ ರಲ್ಲಿ ಒಳ ಹೋದೆ. ನೇರವಾಗಿ ವಿಮಾನದ ಒಳಗೆ ಕಾಲಿಟ್ಟಿದ್ದೆ. ಗಗನ ಸಖಿ ತನ್ನ ಚಂದದ ನಗುವಿನಿಂದ ನಮ್ಮನ್ನು ಸ್ವಾಗತಿಸಿದಳು. ನನ್ನ ಮಗಳನ್ನು ಮುದ್ದು ಮಾಡಿ ಒಳಗೆ ಕಳಿಸಿದಳು. ನನ್ನ ಆಸನದ ಸಂಖ್ಯೆಯನ್ನು ಹುಡುಕಿ ನನ್ನ ಮಗಳನ್ನು ಅಲ್ಲಿ ಹುಷಾರಾಗಿ ಮಲಗಿಸಿದೆ. ನನ್ನ ಲಗೇಜನ್ನ ತಲೆ ಮೇಲೆ ಇರುವ ಬ್ಯಾಗೆಜ್ ಕ್ಯಾಬಿನಿನಲ್ಲಿ ಇಟ್ಟು ಅವಳನ್ನು ಕೈಯಲ್ಲಿ ಹಿಡಿದು ನನ್ನ ಅಕ್ಕ ಪಕ್ಕದಲ್ಲಿರುವವರ ಕಡೆಗೆ ಕಣ್ಣು ಹಾಯಿಸಿದೆ. ನನ್ನ ಪಕ್ಕದ ಸೀಟಿನಲ್ಲಿ ಇನ್ನೊಬ್ಬ ಮಹಿಳೆ ಇದ್ದಳು. ಅವಳ ಕೈಯಲ್ಲೂ ಒಂದು ಮಗು. ಅದು ಮೊದಲನೇ ಆಸನ. ಚಿಕ್ಕ ಮಕ್ಕಳಿದ್ದ ತಾಯಂದಿರಿಗೆ  ಮೀಸಲು.ಆಸನದ ಮುಂದೆ ದೊಡ್ಡ ಗಟ್ಟಿ ಪಾರ್ಟಿಶನ್ ಇದ್ದು ಅಲ್ಲಿ ಬೇಬಿ ಕಾಟನ್ನು ತೂಗು ಬಿಟ್ಟಿರುತ್ತಾರೆ. ತಾಯಂದಿರು ಅಲ್ಲಿ ಮಗುವನ್ನು ಮಲಗಿಸಿ ತಾವು ಅರಾಮವಾಗಿ ಕುಳಿತುಕೊಳ್ಳಬಹುದು. 
 

ನನ್ನ ಬಲಗಡೆಯಲ್ಲಿ ಒಬ್ಬ ವಯಸ್ಸಾದ ತಾಯಿ ಮತ್ತು ಮಧ್ಯ ವಯಸ್ಸಿನ ಯುವಕ ಕುಳಿತಿದ್ದರು. ಆ ತಾಯಿಯನ್ನು ನೋಡಿದೊಡನೆ ಥಟ್ಟನೆ ಯಾರೂ  ಹೇಳಬಹುದಿತ್ತು ಅವರು ಕೇರಳದವರು ಎಂದು. ಆ ಯುವಕನ ಕೈಲ್ಲಿ ದಪ್ಪನೆಯ ಆಂಗ್ಲ  ಪುಸ್ತಕ. ಓದುತ್ತ ಕುಳಿತಿದ್ದ. ಕುತೂಹಲದಿಂದ ನೋಡಿದೆ ಅದು " ಹ್ಯಾರಿ ಪಾಟರ್ ಸಿರೀಸ್ ". ಆ ತಾಯಿ ತನ್ನ ಕೈಯಲ್ಲಿದ್ದ ಡಬ್ಬಿಯಿಂದ ಯಾವುದೊ ಕುರುಕಲು ತಿಂಡಿಯನ್ನು ಅವನಿಗೆ ತಿನಿಸುತ್ತ್ತಿದ್ದಳು. ನಗು ಬಂತು. ಇಷ್ಟು ದೊಡ್ಡ ವಯಸ್ಸಿನ ಮಗ, ಪುಸ್ತಕ ಓದುತ್ತಿದ್ದಾನೆ, ತಾಯಿ ತಿನಿಸುತ್ತಿದ್ದಾಳೆ. ಅವನು ಆರಾಮವಾಗಿ  ತಿನ್ನುತ್ತಿದ್ದಾನೆ. ಆ ತಾಯಿಯ ಮಮತೆಯ ಮೇಲೆ ಮಮತೆಯೂ  ಉಕ್ಕಿ ಬಂತು. ಅವನ ಮೇಲೆ ಏನೋ ಬೇಜಾರು ಕೂಡ ಆಯಿತು. ಸುಮ್ಮನೆ ನನ್ನ ಮಗಳ ಮೇಲೆ  ಗಮನ ಹರಿಸಿದೆ. ವಿಮಾನ ಟೇಕಾಫ್ ಮಾಡುವಾಗ ಅವಳು ಎಚ್ಚರವಿದ್ದರೆ ಅವಳಿಗೆ ಕಿವಿ ನೋವು ಬರಬಹುದು ಅನ್ನುವ ಭಯಕ್ಕೆ ಅವಳನ್ನು ಮಲಗಿಸುವದು ಮುಖ್ಯವಾಗಿತ್ತು ನನಗೆ. ಅದು ಎಷ್ಟೋ ಜನರ ಅನುಭವ.
ಸ್ವಲ್ಪ ಹೊತ್ತಿಗೆ ನನ್ನ ಮಗಳು ಮಲಗಿದಳು. ಅವಳನ್ನು ನನ್ನ ಎದುರಿಗಿರುವ ಬೇಬಿ ಕಾಟಿನಲ್ಲಿ ಮಲಗಿಸಿದೆ. ವಿಮಾನ ಹಾರುವ ಸಮಯವಾಯಿತು. ಗಗನ ಸಖಿ ಸುರಕ್ಷಾ ಪಟ್ಟಿಯನ್ನು ಹೇಗೆ ಉಪಯೋಗಿಸಬೇಕು ಎಂದು ತೋರಿಸುತ್ತಿದ್ದಳು. ಪಕ್ಕದಲ್ಲಿ ಇನ್ನು ತಿಂಡಿ ಸಮಾರಾಧನೆ ನಡೆದಿತ್ತು. ಆ ಪುಸ್ತಕವನ್ನು ಈಗಲೇ  ಓದಿ ಮುಗಿಸುತ್ತಾನೇನೋ ಅನ್ನಿಸಿತು.
ವಿಮಾನ ಹಾರಿದ ಸ್ವಲ್ಪ ಹೊತ್ತಿನ ನಂತರ ಗಗನಸಖಿಯರು ಊಟದ ಗಾಡಿಯನ್ನು  ತಗೆದುಕೊಂಡು ಬಂದು ಎಲ್ಲರಿಗೂ ಹಂಚಲು ಶುರು ಮಾಡಿದರು.ವೆಜ್ಜಾ? ನಾನ್ ವೆಜ್ಜಾ ?,ಕೇಳಿದ್ದನ್ನು ಕೊಡ್ತಾ ಬಂದರು. ನಾನು ಒಂದು ಊಟದ ಬಾಕ್ಸ್ ತಗೊಂಡು ಮುಂದಿನ ಫೋಲ್ಡಿಂಗ್ ಟೇಬಲ್ ಮೇಲೆ ಇಟ್ಟೆ. ಪಕ್ಕದ ಯುವಕ ಮತ್ತು ತಾಯಿ ಕೂಡ ತಗೆದುಕೊಂಡರು. ಮನದಲ್ಲಿ ವಿಚಾರ ಬಂತು, ಊಟಾನೂ  ತಾಯಿನೆ ಮಾಡಿಸಬೇಕೆನೋ? ಅಷ್ಟು ಮಾಡಲಾರದ ಮನುಷ್ಯ ಮುಂದೆ ಜೀವನದಲ್ಲಿ ಏನು ಸಾಧಿಸಿಯಾನು? ಇಂಥಹ ಮಕ್ಕಳಿಂದ ತಾಯಿಗೇನು ಸುಖ? ದೇಶವನ್ನೇನು ಉದ್ಧಾರ ಮಾಡಿಯಾರು?
ಅವಳು ಏಳುವದರಲ್ಲಿ ಮುಗಿಸಬೇಕು ಎಂದುಕೊಂಡು ನಾನು ಆಗಲೇ ಊಟ ಶುರು ಮಾಡಿದ್ದೆ. ಇನ್ನೇನು ಆ ಯುವಕ ಊಟ ಮಾಡಬೇಕು ಅಂತ ಪ್ಲೇಟ್ ತಗೆದ, ಅಷ್ಟರಲ್ಲಿ ವಿಮಾನದಲ್ಲಿ ಘೋಷಣೆ "ದಯವಿಟ್ಟು ಯಾರಾದರೂ ವೈದ್ಯರಿದ್ದರೆ ಬೇಗನೆ ಬನ್ನಿ, ಎಮರ್ಜೆನ್ಸಿ"(ಪ್ರಯಾಣಿಕರ ಡಿಟೇಲ್ ಓದಲು ಸಮಯ ಇರಲಿಲ್ಲವೇನೋ?), ಯಾರೋ ಮಹಿಳೆಗೆ ಲಘು ಹೃದಯಾಘಾತವಾಗಿತ್ತು. ನೋವಿನಿಂದ ನರಳುತ್ತಿದ್ದಳು.
ಆ ಯುವಕ ತನ್ನ ಪ್ಲೇಟ್ ಬಿಟ್ಟು ಓಡಿ ಹೋದ. ಅವನು ವೈದ್ಯನಂತೆ. ವಿಮಾನ  ಮುಂಬೈ ಮುಟ್ಟುವವರೆಗೂ ಆ ಮಹಿಳೆಯ ಜೊತೆ ಇದ್ದು ಅವಳ ಚಿಕಿತ್ಸೆ ಮಾಡಿದ್ದ. ಅವನಿಂದ ಆ ಮಹಿಳೆಯ ಜೀವ ಉಳಿದಿತ್ತು.  

ಅವನ ಆಸನದ  ಮುಂದಿನ ಪ್ಲೇಟ್ ನನ್ನ ನೋಡಿ ನಗುತ್ತಿತ್ತು. 

ಪ್ರಯಾಣ ಜೀವನದ ಹಾಗೆ.ನಮಗೆ ಏನೆಲ್ಲ ಪಾಠ ಕಲಿಸಿಕೊಡುತ್ತದೆ.
ಚಿತ್ರಕೃಪೆ http://en.wikipedia.org/wiki/Emirates_SkyCargo

Tuesday, October 15, 2013

ಮರು-ಭೂಮಿ-ಸಮುದ್ರ

 
ಮರು-ಭೂಮಿ-ಸಮುದ್ರ
****************
 
 
ಅಳುವ ಮನದ ಕಣ್ಣಿರು
ಹೊರ ಬರುವ ಹಾಗಿದ್ದರೆ 
ಜಗತ್ತಿನಲ್ಲಿರುವ
ಈ ಭೂಮಿಯೂ ಸಹ ಸಮುದ್ರವಾಗುತ್ತಿತ್ತು
ಬೇಡ
ಅದು ಭೂಮಿಯಾಗಿಯೇ ಉಳಿಯಲಿ
ಕಣ್ಣಿರು ಮನದಲೇ ಬತ್ತಿ ಮನಸು
ಮರುಭೂಮಿಯಾಗಲಿ


Wednesday, September 25, 2013

__ ದೀಪ

 ಈ ಹನಿಗವನ ಒಂಥರಾ ಹಳೆ ವೈನ್, ಹೊಸ ಬಾಟಲಿ ಇದ್ದ ಹಾಗೆ, ಬಹಳ ಜನ ಈ ದೀಪದ ಮೇಲೆ ಇವೇ ಶಬ್ದಗಳನ್ನ ಉಪಯೋಗಿಸಿ ಬರೆದಿದ್ದಾರೆ, ನಾನು ಕೂಡ ಶಬ್ದಗಳನ್ನ ಆಚೀಚೆ ಮಾಡಿ ಬರೆಯುವ ಪ್ರಯತ್ನವನ್ನು ಮಾಡಿದ್ದೇನೆ.

ದೀಪ

ದೀಪ ಉರಿಯುವದಲ್ಲ 
      ವಿಶೇಷ
ಅದು ಪ್ರಕೃತಿ ನಿಯಮ  
ಉರಿಯುವದು
           ಅದರ ಕರ್ಮ
ತಿಳಿಯಿರಿ ಉರಿವ
           ಹಿಂದಿನ ಮರ್ಮ
ದೇವರ ಮುಂದೆ
           ನಂದಾ  ದೀಪ
ಸತ್ತ ಮನೆಯಲ್ಲಿ
          ಸೂತಕದ ದೀಪ
ಕತ್ತಲಲ್ಲಿರುವರಿಗೆ ಬೆಳಕು ನೀಡಿ
           ದಾರಿ ದೀಪ
ಹಾರುವ ಗಾಳಿಗೆ ಜೊತೆಗೂಡಿ
            ಬೆಂಕಿದೀಪ
ಈಗ ಹೇಳಿ
           ನೀವಾವ ದೀಪ?

Thursday, September 19, 2013

ಕೋರಿಕೆ

ಕೋರಿಕೆ

******** 

ನನ್ನ ಪ್ರೀತಿಯ ಹುಡುಗಾ ತಗೆದುಕೋ
ಆ ಸಾಗರದಡಿಯ ಮುತ್ತುಗಳಿಗಿಂತ 

ಜಾಸ್ತಿ ಸಿಹಿ ಮುತ್ತುಗಳನ
ಎಣಿಸಲಸಾಧ್ಯವಾದ ತೆರೆಗಳಿಗಿಂತ  
ಜಾಸ್ತಿ ಅಪ್ಪುಗೆಗಳನ
ಆಕಾಶದೊಳಗಿನ ತಾರೆಗಳಿಗಿಂತ 
ಜಾಸ್ತಿ ನನ್ನ ಮುಗುಳ್ನಗೆಗಳನ
ಆದರೆ ಕೊಡುವದಿಲ್ಲ  ಮಾತ್ರ
ಸಾಗರದಾಳದ ನನ್ನ ಮನಸಿನ ನೋವನ್ನ
ತೆರೆಗಳಿಗಿಂತ ಜೋರಾಗಿ ಬರುವ ಅಳುವನ್ನ
ತಾರೆಗಳ ಹಿಂದಿನ ಕತ್ತಲಿನಷ್ಟಿರುವ ದುಃಖವನ್ನ

Sunday, August 25, 2013

ಈರುಳ್ಳಿ ಹಾಗು (ಮೊಸಳೆ) ಕಣ್ಣೀರು

ಈರುಳ್ಳಿ ಹಾಗು (ಮೊಸಳೆ) ಕಣ್ಣೀರು
***********************

ಈರುಳ್ಳಿ ಬೆಲೆ ಎರಿತು  ಗಗನಕ್ಕೆ
ಅಳು ಏರಿತು ತಾರಕಕ್ಕೆ
ಅತ್ತದ್ದು ಎಷ್ಟು ದಿನ?
ತಿನ್ನೋದು ಬಿಟ್ಟಿದ್ದು ಎಷ್ಟು ಜನ
Crying Onion Royalty Free Stock Images - Image: 14806619


ಅಳು ಕೇಳಿದ ಸರಕಾರ
ಹಾಕಿದ್ದು ಬರೀ  (ಮೊಸಳೆ)ಕಣ್ಣೀರು
ಗೊತ್ತಾದರೂ ಏನು ಮಾಡುವರು
ಶ್ರೀಸಾಮಾನ್ಯರು ಇವರು

ಇದೆಲ್ಲಾ ಆಗಿದೆ ಅವರಿಗೆ ರೂಢಿ
ದುಷ್ಟ ಬುದ್ಧಿಯೆಲ್ಲಾ ಕೂಡಿ
ಮಾಡಿದ್ದಾರೆ  ಇವರಿಗೆ ಮೋಡಿ
ಎಷ್ಟು ದಿನ ಈ (ಮೊಸಳೆ)ಕಣ್ಣೀರು ಕಾದು ನೋಡಿ
ಚಿತ್ರ ಕೃಪೆ ಇಲ್ಲಿ