Showing posts with label Kannada poem. Show all posts
Showing posts with label Kannada poem. Show all posts

Sunday, July 28, 2013

ಕಾಣದ ಕೈಗಳ ಆಟ

ಕಾಣದ ಕೈಗಳ ಆಟ
****************** 

ಮಧ್ಯಾಹ್ನದ ಬಿಸಿ ಊಟ 
ಸಾಕು ಮಕ್ಕಳ ಪರದಾಟ 
ನಿಲ್ಲಿಸಿ ಹೆತ್ತವರ ಗೋಳಾಟ 
ಸಾಕು ಮಾಡಿ 
ಕಣ್ಣೋರಿಸುವ ಈ ಆಟ 

ಕೊಡುವದಾದರೆ ಕೊಡಿ 
ನಮಗೆ ಕೈ ತುಂಬಾ ಕೆಲಸ 
ಮಕ್ಕಳಿಗೆ ಮೈ ತುಂಬಾ ದಿರಿಸ 
ತಿನಿಸುವೆವು ಅವರಿಗೆ ನಾವೇ 
ಪ್ರೀತಿಯಿಂದ ಬಿಸಿ ಊಟ
ಬಿಸಿ ಊಟ 

Friday, July 19, 2013

ಬುದ್ಧ, ನಾನು ಮತ್ತು ನೀನು

ಬುದ್ಧ, ನಾನು ಮತ್ತು ನೀನು 
******************

ದೇವರ ಧ್ಯಾನ ಮಾಡಿದ ಬುದ್ಧನಿಗೆ
ಸಾವಿರಾರು ಅನುಯಾಯಿಗಳು
ನಿನ್ನ ಧ್ಯಾನ ಮಾಡಿದ ನನಗೆ
ನೂರಾರು ಶತ್ರುಗಳು

ಮನಶಾಂತಿಗಾಗಿ ಮನೆಯನ್ನು ಬಿಟ್ಟ ಆ  ಬುದ್ಧ
ಪೂರ್ತಿ ಸಂಸಾರವೇ ಅವನ ಮನೆಯಾಯಿತು
ನಿನಗಾಗಿ ಮನೆಯನ್ನು ಬಿಟ್ಟ ನಾನು
ಹುಚ್ಚನ ಹಾಗೆ ಸಂಸಾರವೆಲ್ಲ  ಅಲೆದಾಡಿದೆ.


ಸಾವಿಲ್ಲದ ಮನೆಯ ಸಾಸಿವೆಯ ತರ ಹೇಳಿ
ಸಂತೈಸಿದ ಆ ಬುದ್ಧ
ನೀನಿಲ್ಲದ ಮನೆಯಲ್ಲಿ ಸಾಸಿವೆಗೂ 
ಸಾವು ಅಂದೆ ನಾನು

ಆಸೆಯೇ ದುಃಖಕ್ಕೆ ಮೂಲ 
ಉಪದೇಶಿಸಿದ ಆ ಬುದ್ಧ
ನಿನ್ನ ಜೊತೆ ಇರುವ ಆಸೆ ನನಸಾದಾಗ
ಸೇರಿತು ಉಪದೇಶ ಮೂಲೆ

ಬುದ್ಧನಿಗೆ ಜ್ಞಾನೋದಯ ಆಗಿದ್ದು
ಬೋಧಿ ವೃಕ್ಷದ  ಕೆಳಗೆ
ನನಗೆ ಪ್ರೇಮೋದಯ  ಆಗಿದ್ದು
ನಿನ್ನ ಮನೆಯ ಒಳಗೆ

Thursday, July 4, 2013

ಹಣತೆ ಮತ್ತು ನೀನು

ಜಾಣೆ 
ಹತ್ತಲೇ ಇಲ್ಲ ಹಣತೆ
ಅದಕ್ಕೂ ಗೊತ್ತಾಗಿದೆ
ನೀನಿದ್ದಾಗ ಅದರ
ಅವಶ್ಯಕತೆ ಇಲ್ಲ ಎಂದು

ಸವತಿ 
ಈ ಹಣತೆಗೇನೋ ಒಂಥರಾ
ಮತ್ಸರ ನಿನ್ನೊಡನೆ
ನಾನಾರಿಸುವೇನಲ್ಲ ಅದನ್ನ
ನೀ ಬಳಿ ಬಂದೊಡನೇ

ವ್ಯತ್ಯಾಸ 
ಹಣತೆ ಉರಿಯತ್ತೆ 
ಜಗಕೆ ಬೆಳಕು ನೀಡಲು 
ನೀನು ಉರಿಯುತ್ತಿ ನಾ 
ನಿನ್ನ ಮಾತು ಕೇಳಲಿಲ್ಲ ಎಂದು

ರಹಸ್ಯ 
ಗೆಳತಿಯರೇ
ನೀನು ಮತ್ತು ಹಣತೆ
ಅದಕ್ಹೇಗೆ ಗೊತ್ತು
ನಮ್ಮಿಬ್ಬರ ಎಲ್ಲ ಮಾತುಕತೆ



ವ್ಯಂಗ್ಯ 
ಹಣತೆ ಮುಂಜಾನೆ ನನ್ನ
ನೋಡಿ ನಕ್ಕಾಗಲೇ
ತಿಳಿಯಿತು
ಅದು ಕೂಡ ರಾತ್ರಿಯೆಲ್ಲ
ಎಚ್ಚರವಿತ್ತು

ಪರಿಣಾಮ 
ದುರುದುರನೆ ನನ್ನ
ನೋಡಿತು ಹಣತೆ
ಅದಕೂ  ಕೋಪ
ನಿನಗೆ ಬೆನ್ನು ಮಾಡಿ
ಮಲಗಿದ ನನ್ನ ಮೇಲೆ

ಸಾಮ್ಯತೆ 
ಹಣತೆ ಮತ್ತು ನೀನು
ಇಬ್ಬರು ಸುಂದರಿಯರೇ
ಅದು  ದುಂಡಗೆ ಅಗಲವಾಗಿದೆ
ನೀನು ಅಷ್ಟೇ


image source: google

Tuesday, July 2, 2013

ಈ ಕಣ್ಣೀರು

ನಾನು ಹಿಂದಿಯಲ್ಲಿ ಬರೆದ ಕವಿತೆಯನ್ನು ಕನ್ನಡದಲ್ಲಿ ಅನುವಾದಿಸುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಆಶಿಸುತ್ತೇನೆ. 
ಹಿಂದಿ ಕವಿತೆಯ ಲಿಂಕ್ : आँसूं

ಈ ಕಣ್ಣೀರು 

ಅವನ ನೆನಪುಗಳು ಅಳಿಯುವದಿಲ್ಲ 
ಈ ಕಣ್ಣೀರು ಮುಗಿಯುವದಿಲ್ಲ 
ನೆನಪುಗಳ ಜೊತೆ ಮುನಿಸಾಗಲೋ 
ಈ ಕಣ್ಣೀರನ್ನು ತಡೆಯಲೋ 

ನೆನಪುಗಳು ಅವನವೇ 
ಕಣ್ಣೀರು  ಅವನಿಂದಲೇ 
ಮನಸ್ಸೇ ಹೇಗೆ ತಿಳಿಸಲಿ ನಿನಗೆ 
ಇನ್ನು ಇದೇ ನಿನ್ನ ಕತೆ 
ಇದೇ ನಿನ್ನ ವ್ಯಥೆ

Tuesday, June 25, 2013

ವಾಸ್ತವ

ವಾಸ್ತವ
~~~~~ 




ಕೈ ಕೈ  ಹಿಡಿದೇ  ನಡೆದೆವು 
ಸಾಗರದ ಮರಳಿನ ಮೇಲೆ 
ಹಿಂದುರಿಗಿ ನೋಡಿದಾಗ ಕಂಡವು 
ನನ್ನ ಹೆಜ್ಜೆ ಗುರುತು ಮಾತ್ರ 

ಒಬ್ಬರಿಗೊಬ್ಬರು ಅಂಟಿಯೇ 
ನಿಂತಿದ್ದು ಕನ್ನಡಿಯ ಮುಂದೆ 
ಪ್ರತಿಬಿಂಬದಲ್ಲಿ ಕಂಡಿತು 
ನನ್ನ ದೇಹ ಮಾತ್ರ 

 ಕೂಡಿಯೇ ಕನಸು ಕಂಡೆವು
                                ಪ್ರತಿ ಕ್ಷಣ ಜೊತೆಗಿರುವೆವೆಂದು 
                                 ಎಚ್ಚರವಾದಾಗ ಉಳಿದಿದ್ದು 
                                     ನಾನೊಬ್ಬಳು  ಮಾತ್ರ 

                                         photos:google source

Thursday, June 20, 2013

???

         ???
         
ನೀ ನನ್ನ ಜೊತೆಗಿದ್ದರೆ 
ಈ ಜಗತ್ತನ್ನೇ ಗೆಲ್ಲುವೆ 
ಅಂದಿದ್ದ ಆ ಹುಡುಗ 
ವಿಷ ಸೇವಿಸಿದ್ದು ?

ಅವಳು ಬೇರೆಯವರ ಸ್ವತ್ತು 
ಎಂದು ಗೊತ್ತಿದ್ದೂ 
ಅವಳನ್ನೇ ಜೀವಕ್ಕಿಂತ
ಹೆಚ್ಚಾಗಿ ಪ್ರೀತಿಸಿದ್ದು?

ನೀನೆ ನನ್ನ ದಾರಿ ದೀಪ 
ಅಂದ ಆ ಹುಡುಗಿ 
ಬೇರೆಯವನ ಬಾಳಿನ 
ನಂದಾ ದೀಪವಾಗಿದ್ದು ?

ತನ್ನ ತನು ಮನವನ್ನು 
ಇವನಿಗರ್ಪಿಸಿ 
ಪೂರ್ತಿ ಜೀವನವನ್ನೇ 
ಬೇರೆಯವನಿಗೆ ಕೊಟ್ಟದ್ದು?






Wednesday, June 5, 2013

ಈ ಜೀವನ


ಈ ಜೀವನ 
*******
ಬರೆದ ಸಾಲುಗಳ ಶಬ್ಧಗಳ ನಡುವೆ ಇರುವ ಖಾಲಿ ಜಗದ ಹಾಗೆ 
ಈ ಜೀವನ 
ಪೂರ್ಣ ವಿರಾಮವಿಲ್ಲದೆ ಬರೀ ಅಲ್ಪ ವಿರಾಮವಾಗಿದೆ 
ಈ ಜೀವನ 
ಈ ಖಾಲಿ ಮತ್ತೆ ಅಲ್ಪ ವಿರಾಮಗಳಿಂದ 
ಮುಕ್ತಿ ಸಿಕ್ಕಾಗಲೇ ಪೂರ್ಣ ವಿರಾಮವಾಗುವದು 
ಈ ಜೀವನ

Saturday, June 1, 2013

ನೋವು



ನೋವು 

ಮೊನ್ನೆ ಪ್ರಿಯ ಗೆಳತಿಯ ತಮ್ಮನ ಮದುವೆಯಲ್ಲಿ 
ಹೋಗಿದ್ದು ಗಂಡಿನ ಕಡೆಯಿಂದ, 
ವಧುವಿನ ಕನ್ಯದಾನದ ಸಮಯದಲ್ಲಿ
ನೀರೇಕೆ ಬಂತು ಕಣ್ಣಿಂದ,
ಅನುಭವಿಸಿದ   ನನ್ನ ಮನದಲ್ಲಿ 
ಇರುವ ಅಗಲಿಕೆಯ ನೋವಿಂದ. 

Thursday, May 23, 2013

ಅಲ್ಪ ಸಂಖ್ಯಾತಳು!!




ಅಲ್ಪ ಸಂಖ್ಯಾತಳು!!

ನಾನು ಕೂಡ ಅಲ್ಪ ಸಂಖ್ಯಾತಳೇ!
ಪರೀಕ್ಷೆಯಲ್ಲಿ ಸಿಗ್ತಾ ಇತ್ತು ಅಲ್ಪ ಸಂಖ್ಯೆಗಳೇ!
ಶಾಲೆಯಲ್ಲಿ ಇದ್ದ ಗೆಳತಿಯರು ಅಲ್ಪ ಸಂಖ್ಯೆಯಲ್ಲೇ !
ನೌಕರಿಯಲ್ಲಿ ಸಿಗ್ತಾ ಇತ್ತು ಅಲ್ಪ ಸಂಬಳವೇ!
ಈಗ ಹೇಳಿ ಹೌದಲ್ಲವೋ 
ನಾನು ಕೂಡ ಅಲ್ಪ ಸಂಖ್ಯಾತಳೇ ??

Wednesday, May 22, 2013

ವಿಪರ್ಯಾಸ

ವಿಪರ್ಯಾಸ 


ಚಿಕ್ಕವರಿದ್ದಾಗ,
ಇವಳು ನನ್ನಮ್ಮ, ಇವಳು ನನ್ನಮ್ಮ,
ಅಲ್ಲ ಅಲ್ಲ;
ಅವಳು ನನ್ನಮ್ಮ  

ದೊಡ್ಡವರಾದಾಗ,
ನಿನ್ನ ಬಳಿ  ಇರಲಿ ಅಮ್ಮ 
ಇಲ್ಲ ಇಲ್ಲ;
ನಿನ್ನ ಬಳಿಯೇ ಇರಲಿ ಅಮ್ಮ 


Monday, May 20, 2013

...ಲ್ಲ


...ಲ್ಲ 

ರಾತ್ರಿಯೆಲ್ಲ ನಿದ್ದೆಯಿಲ್ಲ 
ಮೈ ಕೈ ನೋವಾಯಿತೆಲ್ಲ 
ಕೆಂಪಾಯಿತು ಎರಡು ಗಲ್ಲ!!
 ಆಗುತಿದ್ದ ಸಪ್ಪಳಕ್ಕೆ 
ಮನೆಮಂದಿಗೆಲ್ಲ ನಿದ್ದೆಯಿಲ್ಲ 
ಏನೇನೊ ತಿಳಿದಿರಲ್ಲ !!
ಕಾರಣ ಮಾತ್ರ ನಲ್ಲನಲ್ಲ 
ರಾತ್ರಿಯೆಲ್ಲಾ ಕರೆಂಟ್ ಇಲ್ಲ 
ಕಚ್ಚುತಿತ್ತು ಸೊಳ್ಳೆಯೆಲ್ಲ!! 

Wednesday, May 15, 2013

ಈ ನೆನಪುಗಳು



ಗೋರಿಯಲ್ಲಿನ  ಹೆಣ  ಥಟ್ಟನೆ ಎದ್ದು ಬಂದಂತೆ 
ಈ ನೆನಪುಗಳು 

ಬರದ ಭೂಮಿಗೆ ಒಮ್ಮೆಲೇ ಮಳೆ ಸುರಿದಂತೆ 
ಈ ನೆನಪುಗಳು 

ಮರಭೂಮಿಯಲ್ಲಿಯ ಮರೀಚಿಕೆಯ  ಹಾಗೆ 
ಈ ನೆನಪುಗಳು 

ಭಯದ, ಖುಷಿಯ,ಸಿಹಿಯ,ಕಹಿಯ 
ಈ ನೆನಪುಗಳು 

ಭೂತಕಾಲದ ಪಿಶಾಚಿ,
ವರ್ತಮಾನದ ಅನುಭವ,
ಭವಿಷ್ಯದ ಆಧಾರ
ಈ ನೆನಪುಗಳು 

ಯಾರಿಗೆ ಬೇಡ  ಯಾರಿಗೆ ಬೇಕು 
ಈ ನೆನಪುಗಳು 

Friday, February 1, 2013

ಯಾವಾಗ



ಯಾವಾಗ 


ನಿನ್ನ ಜೀವವಾಗಿದ್ದೆ,ನಿನ್ನ ಜೀವನವಾಗಿದ್ದೆ.
ಯಾವಾಗ 
ನಿನ್ನ ಬಾಳ ಜ್ಯೋತಿ ಆರಿಸುವ ಬಿರುಗಾಳಿಯಾದೆ ನಾನು?

ನಿನ್ನ ಹೃದಯದ ಪ್ರತಿ ಬಡಿತದ ಹೆಸರಾಗಿದ್ದೆ.
ಯಾವಾಗ 
ನಿನ್ನ ಉಸಿರು ಕಟ್ಟೋ ಕೆಸರಾದೆ ನಾನು?

 ನಿನ್ನ ಬಾಳಿನ ಒಂದೇ ಗುರಿಯಾಗಿದ್ದೆ.
ಯಾವಾಗ 
ನಿನ್ನನ್ನೇ ಕೊಲ್ಲುವ ಹೆಮ್ಮಾರಿಯಾದೆ ನಾನು?

ಕೋಟಿ ಜನುಮದ ಸಂಗಾತಿಯಾಗುವ 
ಕನಸು ಕಟ್ಟಿದ್ದೆ ನೀನು 
ಕೋಟಿ ಜನುಮವಲ್ಲ,ಒಂದು ಕ್ಷಣವೂ 
ಜೊತೆಯಾಗಲಿಲ್ಲ ನಾವು.

ಕೊನೆಯಾಗಲಿ ಈ ರಾತ್ರಿ ನನಗೆ 
ಆ ಸೂರ್ಯ ನೋಡಿ ನಗಲಿ ನಾಳೆಗೆ 
ಕೊನೆಯಾಗಲಿರುವ ಆ ನಾಳೆಗೆ ಕಾದು ಕುಳಿತಿರುವೆ.
ಮರಣಕ್ಕೆ ಮಹೂರ್ತ ಬಂದಿದೆ ಅಲ್ಲವೇ 
ಮರಣವೇ ಮಹಾನವಮಿಯಾಗಲಿ ನನಗೆ 



ಮರು ಜನ್ಮವಿದ್ದರೆ ನಮಗೆ,
ಮತ್ತೇ ಕೂಡೋಣ,ಕಾದಾಡೋಣ,
ಕಾಯುವೆಯಾ ಅಲ್ಲಿಯವರೆಗೂ?
ಇರುವೆಯಾ ಕೊನೆಯವರೆಗೂ?





Sunday, October 7, 2012

ಹುಚ್ಚು ಖೋಡಿ ಮನಸು

ಹುಚ್ಚು ಖೋಡಿ ಮನಸು

ಹುಚ್ಚು ಖೋಡಿ ಮನಸು ನೀನು 
ಮಾತೇ ಕೇಳೋಲ್ಲ
ನನ್ನೋಳಗೆನೆ  ಇದ್ದರೂ ನೀನು
ಒಡತಿ ನಾನಲ್ಲ 

ಯಾಕೆ ನಿನಗೆ ಅವನ ಚಿಂತೆ
ನಿನ್ನ ಮನಸು ಅವನಿಗೆ ಗೊತ್ತೇ 
ಪ್ರೀತಿ ಅನ್ನೋದು ಹುಚ್ಚರ ಸಂತೆ
ಆ ನೋವು ನಿನಗೆ ಬೇಕೇ ಮತ್ತೆ

ಅವನಿಲ್ಲದೇ  ಜೀವನ ಇಲ್ಲ 
ಅನ್ನೋದೆಲ್ಲಾ ನಿಜವೇ  ಅಲ್ಲ 
ನನ್ನ ಜೀವ ನಿನ್ನದು
ನಿನ್ನ ಬಡಿತ ನನ್ನದು 





Wednesday, June 23, 2010

ಎಲ್ಲಾ ನೀನೇ

ಎಲ್ಲಾ ನೀನೇ  
ನನ್ನ ಮನದಂಗಳದ 
ನೆನಪಿನ ಮರದಲ್ಲಿ
ಎಲೆ ಹೂವು ಹಣ್ಣು 
ಎಲ್ಲಾ ನೀನೇ !!

Saturday, June 19, 2010

ನೆನಪು

        ನೆನಪು 
ನಿನ್ನ ನೆನಪು ಬಂದಾಗ 
ಮನಸ್ಸು ಹುಚ್ಚು ಕುದುರೆ 
ಆಗಿ ಎಲ್ಲಿ ನೀ ಎಂದಾಗ 
ಹರಿಯಿತಾಗ ಕಣ್ಣೀರ ಧಾರೆ